ಹಸಿರು ಕ್ರಾಂತಿಯ ಹರಿಕಾರ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಇನ್ನಿಲ್ಲ
ಖ್ಯಾತ ಕೃಷಿ ವಿಜ್ಞಾನಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಂ.ಎಸ್. ಸ್ವಾಮಿನಾಥನ್ ನಿಧನರಾಗಿದ್ದು, ಅವರಿಗೆ 98 ವರ್ಷ ವಯಸ್ಸಾಗಿತ್ತು.
ದೇಶದಲ್ಲಿ ಹಸಿರುಕ್ರಾಂತಿಯ ರೂವಾರಿಯಾದ ಸ್ವಾಮಿನಾಥನ್ ಚೆನ್ನೈನ ತಮ್ಮ ನಿವಾಸದಲ್ಲಿ ಗುರುವಾರ ಮುಂಜಾನೆ ವಿಧಿವಶರಾದರು.
ಕೃಷಿ ತಜ್ಞ ಹಾಗೂ ಹೊಸ ತಳಿಗಳ ಅಭಿವೃದ್ದಿಯಲ್ಲಿ ವಿಶೇಷ ಸೇವೆ ಸಲ್ಲಿಸಿದ್ದ ಸ್ವಾಮಿನಾಥನ್ ದೇಶದಲ್ಲಿ ಗೋಧಿ ಮತ್ತು ಅಕ್ಕಿ ಉತ್ಪಾದನೆ ಪ್ರಮಾಣ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾಮಿನಾಥನ್ ಅವರ ಶ್ರಮದಿಂದಾಗಿ 1960ರಲ್ಲಿ ಭಾರತ ಬರ ಹಾಗೂ ಹಸಿವಿನ ಸಮಸ್ಯೆಯಿಂದ ಪಾರಾಯಿತು. ಅಲ್ಲದೇ ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಲು ಸಾಧ್ಯವಾಯಿತು ಎಂದು ಅಮೆರಿಕದ ವಿಜ್ಞಾನಿ ನೊರ್ಮನ್ ಬೊರ್ಲಾಗ್ ಪ್ರಶಂಸೆ ವ್ಯಕ್ತಪಡಿಸಿದ್ದರು.
ವಿಶ್ವದ ಅತ್ಯುನ್ನತ ಕೃಷಿ ಸಂಶೋಧನೆಗೆ ನೀಡಲಾಗುವ ಜಾಗತಿಕ ಪ್ರಶಸ್ತಿಗೆ ಸ್ವಾಮಿನಾಥನ್ 1987ರಲ್ಲಿ ಪ್ರೊಫೆಸರ್ ಆಗಿದ್ದಾಗ ಸ್ವೀಕರಿಸಿದ್ದರು. 1971ರಲ್ಲಿ ರಾಮನ್ ಮ್ಯಾಗಸ್ಸೆ, 1986ರಲ್ಲಿ ಅಲ್ಬರ್ಟ್ ಐನ್ ಸ್ಟಿನ್ ಮುಂತಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.