ಮಹಿಳಾ ಮೀಸಲು ವಿಧೇಯಕದಲ್ಲಿ ಒಬಿಸಿ ಸೇರ್ಪಡೆ: ಸೋನಿಯಾ ಗಾಂಧಿ ಒತ್ತಾಯ
ಮಹಿಳಾ ಮೀಸಲು ವಿಧೇಶಯಕದಲ್ಲಿ ಹಿಂದುಳಿದ ವರ್ಗದ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ವಿಶೇಷ ಲೋಕಸಭಾ ಅಧಿವೇಶನದ ಮೂರನೇ ದಿನವಾದ ಬುಧವಾರ ಮಹಿಳಾ ವಿಧೇಯಕ ಮಂಡನೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಮಹಿಳಾ ಮೀಸಲು ವಿಧೇಯಕವನ್ನು ಕಾಂಗ್ರೆಸ್ ಬೆಂಬಲಿಸಲಿದೆ. ಈ ಮೂಲಕ ರಾಜೀವ್ ಗಾಂಧಿ ಅವರ ಕನಸು ನನಸಾಗಲಿದೆ ಎಂದರು.
ಕಾಂಗ್ರೆಸ್ ಮೊದಲು ಲೋಕಸಭೆಗೆ ಮಂಡಿಸಿತ್ತು. ಆದ್ದರಿಂದ ಈ ವಿಧೇಯಕದ ಶ್ರೇಯಸ್ಸು ಕಾಂಗ್ರೆಸ್ ಗೆ ಕೂಡ ಸಲ್ಲುತ್ತದೆ. ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಮೊದಲ ಬಾರಿ ಮಹಿಳಾ ಮೀಸಲು ವಿಧೇಯಕವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತಂದಿದ್ದರು ಎಂದು ಅವರು ಹೇಳಿದರು.
ಮಹಿಳೆಯರಿಗೆ ಚನಾವಣೆಯಲ್ಲಿ ಶೇ.33ರಷ್ಟು ಮೀಸಲು ಕಲ್ಪಿಸುವ ಮಹಿಳಾ ಮೀಸಲು ವಿಧೇಯಕದಲ್ಲಿ ಹಿಂದುಳಿದ ವರ್ಗದ ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು. ಈ ಮೂಲಕ ಯಾವುದೇ ಒಂದು ಜಾತಿ ಪ್ರಾಬಲ್ಯ ಹೊಂದದೇ ಎಲ್ಲಾ ಸಮುದಾಯದ ಮಹಿಳೆಗೂ ಸಮಾನ ಅವಕಾಶ ಸಿಗಬೇಕು ಎಂದು ಸೋನಿಯಾ ಗಾಂಧಿ ಆಗ್ರಹಿಸಿದರು.