ಜೈಲರ್ ಚಿತ್ರದಲ್ಲಿ ನಟಿಸಿದ್ದ ನಟ, ನಿರ್ದೇಶಕ ಮಾರಿಮುತ್ತು ನಿಧನ
ಕಿರುತೆರೆ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವಾಗ ಹೃದಯಾಘಾತವಾಗಿ ಖ್ಯಾತ ತಮಿಳು ನಟ ಹಾಗೂ ನಿರ್ದೇಶಕ ಜಿ. ಮಾರಿಮುತ್ತು ಮೃತಪಟ್ಟಿದ್ದಾರೆ. ಅವರಿಗೆ ೫೮ ವರ್ಷ ವಯಸ್ಸಾಗಿತ್ತು.
ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ʻಎಥಿರ್ ನೀಚಲ್ʼ ಕಾರ್ಯಕ್ರಮಕ್ಕೆ ಡಬ್ಬಿಂಗ್ ಮಾಡುವಾಗ ಹೃದಯಾಘಾತವಾಗಿ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆದಲ್ಲೇ ಮೃತಪಟ್ಟಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆದ ರಜನಿಕಾಂತ್ ಅಭಿನಯದ ಜೈಲರ್ ಮತ್ತು ರೆಡ್ ಸ್ಯಾಂಡಲ್ ವುಡ್ ಚಿತ್ರಗಳಲ್ಲಿ ನಟಿಸಿದ್ದ ಮಾರಿಮುತ್ತು ಯೂಟ್ಯೂಬ್ ಚಾನೆಲ್ ಮೂಲಕ ಭಾರೀ ಜನಪ್ರಿಯರಾಗಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ತಮ್ಮ ನೇರ ನುಡಿಗಳಿಂದ ಗಮನ ಸೆಳೆದಿದ್ದ ಮಾರಿಮುತ್ತು ಜೈಲರ್ ಚಿತ್ರದ ವಿಲನ್ ಗಳ ಪೈಕಿ ಒಬ್ಬರಾಗಿ ನಟಿಸಿದ್ದರು.