December 22, 2024

ಡಿಸೆಂಬರ್‌ನಲ್ಲೇ ಲೋಕಸಭೆ ಚುನಾವಣೆಗೆ ಬಿಜೆಪಿ ಚಿಂತನೆ?

1 min read

ಕೇಂದ್ರ ಬಿಜೆಪಿ ಸರ್ಕಾರದ ಬಗ್ಗೆ ದೇಶದ ಜನತೆ ಭ್ರಮನಿರಸನಗೊಂಡಿರುವುದು ಒಂದೆಡೆಯಾದರೆ, ಪ್ರಧಾನಿ ಮೋದಿ ಅವರ ವರ್ಚಸ್ಸು ಕೂಡ ಕುಂದಿದೆ, ಅವರ ಹೆಸರನ್ನಷ್ಟೇ ಮುಂದಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಪ್ರಯಾಸದ ಕೆಲಸ ಎಂಬುದನ್ನು ಬಿಜೆಪಿ ಒಪ್ಪಿಕೊಂಡಿರುವಂತೆ ಕಾಣಿಸುತ್ತಿದೆ.

ಇದೇ ಕಾರಣಕ್ಕೆ ಬಿಜೆಪಿಯು 2024ರ ಲೋಕಸಭೆ ಚುನಾವಣೆಯನ್ನು ಅವಧಿಗೂ ಮೊದಲೇ ಅಂದರೆ ಡಿಸೆಂಬರ್‌ನಲ್ಲೇ ನಡೆಸುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. I.N.D.I.A ಮೈತ್ರಿ ಕೂಟ ರಚನೆಯೂ ಕೂಡ ಬಿಜೆಪಿ ಪಾಲಿಗೆ ಭೀತಿ ಹುಟ್ಟಿಸಿದೆ. ಈ ಮೈತ್ರಿಕೂಟವು ದೃಢವಾಗಿ ಬೇರೂರಿ ಸಕ್ರಿಯ ಚಟುವಟಿಕೆ ಆರಂಭಿಸಲು ಕಾಲಾವಕಾಶವೇ ಸಸಿಗದಂತೆ ಲೋಕಸಭೆ ಚುನಾವಣೆ ನಡೆಸಿ ಅಧಿಕಾರ ಹಿಡಿಯಬೇಕೆಂಬುದು ಬಿಜೆಪಿಯ ಲೆಕ್ಕಾಚಾರ.

ದೇಶದಲ್ಲಿ ಸರ್ಕಾರವು ಬಿಜೆಪಿ ಅಡುಗೆ ಅನಿಲ ಬೆಲೆ, ಪೆಟ್ರೋಲ್‌-ಡಿಸೇಲ್‌ ಬೆಲೆ ಮನಬಂದಂತೆ ಹೆಚ್ಚಿಸಿ ,ಈಗ ಚುನಾವಣೆಗೆ ಪೂರ್ವ ತಯಾರಿಯಾಗಿ 200ರೂ. ಇಳಿಕೆ ಪ್ರಕಟಿಸಿದೆ. ಅಧಿಕಾರಕ್ಕೆ ಬಂದ ಕೂಡಲೇ ಮತ್ತೆ ಅಡುಗೆ ಅನಿಲ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಏಟಿಗೆ ಜನಸಾಮಾನ್ಯರು ಸಿದ್ಧರಾಗಬೇಕಾಗುತ್ತದೆ ಎಂದು ಜನ ಸಾರ್ವಜನಿಕವಾಗಿಯೇ ಚರ್ಚೆ ನಡೆಸುತ್ತಿರುವುದು ಕೂಡ ಬಿಜೆಪಿಯನ್ನು ಕಂಗೆಡಿಸಿರುವುದು ಸುಳ್ಳಲ್ಲ. ಕಾಂಗ್ರೆಸ್‌ ಸರ್ಕಾರಗಳು ಪ್ರಕಟಿಸಿದ ಉಚಿತ ಯೋಜನೆಗಳನ್ನು ರೇವ್ಡಿ ಎಂದು ಪ್ರಧಾನಿ ಸೇರಿದಂತೆ ಬಿಜೆಪಿ ವ್ಯಾಪಕವಾಗಿ ಟೀಕಿಸುತ್ತಿರುವ ಮಧ್ಯೆಯೇ ತಮ್ಮದೇ ಸರ್ಕಾರ ಇರುವಲ್ಲಿ ಬಿಜೆಪಿ ಉಚಿತ ಯೋಜನೆಗಳನ್ನು ಪ್ರಕಟಿಸುವ ಮೂಲಕ ಅಧಿಕಾರಕ್ಕೇರುವ ಪ್ರಯತ್ನದಲ್ಲಿರುವುದು ಕೂಡ ಜನತೆಯ ಅರಿವಿಗೆ ಬಂದಿದೆ.

ದೇಶದಲ್ಲಿ ಕೆಲವರು ಏನನ್ನಾದರೂ ಮಾಡಲು ಸಮರ್ಥರಾಗಿದ್ದಾರೆ, ಲೋಕಸಭೆ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮುಂಬಯಿನಲ್ಲಿ ಮೊನ್ನೆಯಷ್ಟೇ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯನ್ನು ನಡೆಸಬಹುದು, ಎಲ್ಲಾ ಹೆಲಿಕಾಪ್ಟರ್‌ಗಳನ್ನು ಆ ಪಕ್ಷವು ಪ್ರಚಾರಕ್ಕಾಗಿ ಕಾಯ್ದಿರಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಹೇಳಿರುವುದು ಗಮನಾರ್ಹ.
2019 ರ ಮಾದರಿಯನ್ನು 2024 ರಲ್ಲಿ ಪುನರಾವರ್ತಿಸುವುದು ಬಿಜೆಪಿಗೆ ಸುಲಭವಲ್ಲ ಎಂಬ ಸಂಸಸ ಶಶಿ ತರೂರ್‌ ಹೇಳಿಕೆ ಕೂಡ ಬಿಜೆಪಿ ಅವಧಿಪೂರ್ವ ಚುನಾವಣೆ ಪೂರ್ಣ ನಡೆಸಲು ಆಸಕ್ತಿ ವಹಿಸಲಿದೆ ಎಂಬ ವಿಚಾರಕ್ಕೆ ಒತ್ತು ನೀಡುತ್ತದೆ.

ಒಂದು ದೇಶ- ಒಂದು ಚುನಾವಣೆ ಕಾರ್ಯ ಸಾಧ್ಯತೆಯ ಪರಿಶೀಲನೆಗೆ ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿರುವ ಬೆಳವಣಿಗೆ ಕೂಡ ಅವಧಿ ಪೂರ್ಣಗೊಳ್ಳುವ ಮುನ್ನವೇ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ ಕುರಿತ ಚರ್ಚೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.

Leave a Reply

Your email address will not be published. Required fields are marked *