ತಮಿಳುನಾಡಿಗೆ ಹರಿದ ಕಾವೇರಿ : ಸ್ಟಾಲಿನ್ ಜೊತೆ ಸ್ನೇಹಕ್ಕಾಗಿ ಕರ್ನಾಟಕ ರೈತರ ಬಲಿ!
ಬೆಂಗಳೂರು : ಐಎನ್‌ಡಿಐಎ ಮೈತ್ರಿ ಒಕ್ಕೂಟದ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ರೈತರ ಹಿತಾಸಕ್ತಿಯನ್ನು ಬಲಿಕೊಡುತ್ತಿದೆಯೇ? ಹೀಗೊಂದು ಪ್ರಶ್ನೆ ರಾಜ್ಯದ ಜನತೆಯ ಮುಂದೆ ಎದುರಾಗಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆ ದಾಟು ಪಾದಯಾತ್ರೆಯ ವೇಳೆ ಗುಡುಗಿದ್ದ ಡಿ.ಕೆ.ಶಿವಕುಮಾರ್, ಈಗ ತಮಿಳುನಾಡಿಗೆ ನೀರುವ ಬಿಡುವ ವಿಚಾರದಲ್ಲಿ ತುಟಿಪಿಟಿಕ್ಕೆನ್ನದಿರುವುದು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿದೆ.
ಮಾಜಿ ಸಚಿವ ಸಿ.ಟಿ.ರವಿ ಈ ಬಗ್ಗೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಸ್ಟಾಲಿನ್ ಸ್ನೇಹಕ್ಕಾಗಿ ನೀವು ಕರ್ನಾಟಕ ರಾಜ್ಯದ ಹಿತವನ್ನು ಬಲಿಕೊಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿರುವ ಅವರು, ಈ ಸಂಕಷ್ಟದ ಸಮಯದಲ್ಲಿಯೂ ತಮಿಳುನಾಡಿಗೆ ನೀರು ಬಿಡುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.
ಸಂಕಷ್ಟದ ಸೂತ್ರವನ್ನು ಮರೆತು ನೀವು ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ. ಈ ಸೂತ್ರವನ್ನು ಬದಿಗಿಟ್ಟು ನೀವು ರಾಜಕೀಯ ಮಾಡುತ್ತಿದ್ದೀರಿ. ನೀರು ಬಿಟ್ಟ ಮೇಲೆ ತಮಿಳುನಾಡಿನ ಜೊತೆ ಸಭೆ ನಡೆಸಿ ಏನು ಪ್ರಯೋಜನ ಎಂದು ಪ್ರಶ್ನಿಸಿರುವ ಸಿ.ಟಿ.ರವಿ, ಸಭೆ ನಡೆಸುವಂತಿದ್ದರೆ ಈ ಮೊದಲೇ ನಡೆಸಬೇಕಿತ್ತು. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿದ್ದರೂ ಸಹ ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯದ ಜನರಿಗೆ ಅನ್ಯಾಯವೆಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ.