ರಾಜಕೀಯ ನಿವೃತ್ತಿ ಘೋಷಿಸಿದ ಬಿ.ಎನ್.ಬಚ್ಚೇಗೌಡ
ಚಿಕ್ಕಬಳ್ಳಾಪುರ : ಸಂಸದ ಬಿ.ಎನ್.ಬಚ್ಚೇಗೌಡ ರಾಜಕೀಯ ಕ್ಷೇತ್ರದಿಂದ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಚಿಕ್ಕಬಳ್ಳಾಪುರದ ಸಂಸದರಾಗಿರುವ ಬಿ.ಎನ್ .ಬಚ್ಚೇಗೌಡ, ಪ್ರಧಾನಿ ಮೋದಿಯವರ ಪ್ರಕಾರ ಎಪ್ಪತ್ತು ವರ್ಷಕ್ಕೆ ನಿವೃತ್ತಿ ಪಡೆಯಬೇಕು. ಈಗಾಗಲೇ ನನಗೆ ಎಂಬತ್ತಕ್ಕೂ ಹೆಚ್ಚು ವಯಸಾಗಿರುವುದರಿಂದ ಟಿಕೆಟ್ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ನಿವೃತ್ತಿ ಘೋಷಿಸುತ್ತಿರುವುದಾಗಿ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ರಾಜಕಾರಣದಲ್ಲಿ ಭಾಗವಹಿಸದಿದ್ದರೂ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಬಿ.ಎನ್. ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ.
ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಚ್ಚೇಗೌಡ, ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿದ್ದಾರೆ. ಅಕ್ಕಿ ವಿಷಯದಲ್ಲಿ ಕೇಂದ್ರ ನಿರ್ಧಾರ ಸರಿಯಲ್ಲ ಎಂದಿರುವ ಬಚ್ಚೇಗೌಡ, ರಾಜ್ಯ ಸಂಸದನಾಗಿ ಹೇಳುತ್ತಿದ್ದೇನೆ. ಬಿಜೆಪಿ ಅಕ್ಕಿ ಪೂರೈಸಬೇಕಿತ್ತು ಎಂದು ಪರೋಕ್ಷವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕರಾಗಿದ್ದು, ಮಗನ ಭವಿಷ್ಯದ ದೃಷ್ಟಿಯಿಂದ ತಮ್ಮ ಈ ಹೆಜ್ಜೆಯಿಟ್ಟಿದ್ದಾರೆ ಎನ್ನಲಾಗಿದೆ. ಶರತ್ ಬಚ್ಚೇಗೌಡ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ 2019 ರಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿತ್ತು.