January 12, 2025

CHIKKABALLAPURA MP ELECTION : ಚಿಕ್ಕಬಳ್ಳಾಪುರ ಲೋಕಸಭಾ ಅಖಾಡ – ಯಾರ ಕೈ ಹಿಡಿಯಲಿದ್ದಾನೆ ಮತದಾರ?

1 min read
Chikkaballapura MP image

ಚಿಕ್ಕಬಳ್ಳಾಪುರ :   2019 ರಲ್ಲಿ ಬಿಜೆಪಿ ಕರ್ನಾಟಕವನ್ನು ಸಂಪೂರ್ಣ ಕೇಸರಿಮಯಗೊಳಿಸಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಹಾಗೂ ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ ಹೊರತುಪಡಿಸಿದರೆ ಮಿಕ್ಕಂತೆ ಬಿಜೆಪಿ ಪಾಲಾಗಿದ್ದ ಲೋಕಸಭಾ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು.

ಆದರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದೆ. ೧೩೬ ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ ಪಕ್ಷ ೨೦ ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದೆ. ಜೆಡಿಎಸ್‌ ಅಧಿಕೃತ ಪ್ರತಿಪಕ್ಷ ಸ್ಥಾನವನ್ನೂ ಸಹ ಪಡೆಯದ ದೀನ ಸ್ಥಿತಿ ತಲುಪಿದೆ.  ಕಳೆದ ಹಾಲಿ ಸಂಸದರಾಗಿರುವ ಬಿ.ಎನ್‌.ಬಚ್ಚೇಗೌಡರಿಂದ ಯಾವ ನಿರೀಕ್ಷೆಯೂ ಇಲ್ಲ. ಸ್ವತಃ ಬಚ್ಚೇಗೌಡರ ಪುತ್ರ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಪಕ್ಷದ ಶಾಸಕನಾಗಿರುವುದು ಬಚ್ಚೇಗೌಡರಿಗೆ ನುಂಗಲಾರದ ತುತ್ತು.೮೦ ವರ್ಷ ಹಿರಿಯರಾದ ಬಚ್ಚೇಗೌಡರ ರಾಜಕೀಯ ನಿವೃತ್ತಿ ಬಹುತೇಕ ಖಚಿತ ಎಂದು ಕ್ಷೇತ್ರದ ಜನತೆಯೇ ಮಾತಾಡುವಂತಾಗಿದೆ.

ಇನ್ನು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಹಲವರು ಈಗಾಗಲೇ ಚಿಕ್ಕಬಳ್ಳಾಪುರದ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಪೈಕಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಮುಂಚೂಣಿಯಲ್ಲಿದ್ದು,   ಚಿಕ್ಕಬಳ್ಳಾಪುರದಲ್ಲಿ ಕಚೇರಿ ಸ್ಥಾಪಿಸಿ ತಮ್ಮ ಕಾರ್ಯಾರಂಭ ಮಾಡಿದ್ದಾರೆ. ಆದರೆ ಕ್ಷೇತ್ರದ ಹಲವು ಹಿರಿಯ ಕಾಂಗ್ರೆಸ್‌ ಮುಖಂಡರು ಮೊಯ್ಲಿ ವಿರುದ್ಧ ನಿಂತಿರುವುದೂ ಸಹ ಸತ್ಯ. ಒಂದು ವೇಳೆ ಮೊಯ್ಲಿ ಅವರಿಗೆ ಲೋಕಸಭಾ ಟಿಕೆಟ್‌ ದೊರೆತರೂ ಪಕ್ಷದ ಒಳೇಟುಗಳನ್ನು ಎದುರಿಸಬೇಕಾಗಬಹುದು. ಎಂಎಲ್‌ಸಿ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಸೀತಾರಾಂ ಅವರು ಹಲವು ಬಾರಿ ಸಾರ್ವಜನಿಕವಾಗಿ ವೀರಪ್ಪ ಮೊಯ್ಲಿ ವಿರುದ್ಧ ಹರಿಹಾಯ್ದಿದ್ದು, ಅವರಿಗೆ ಪದೇ ಪದೇ ಟಿಕೆಟ್‌ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಬಿಜೆಪಿಯಿಂದಲೂ ಸಹ ಹಲವು ಆಕಾಂಕ್ಷಿಗಳಿದ್ದಾರೆ.   ಇವರ ಪೈಕಿ ದೇವನಹಳ್ಳಿ ತಾಲ್ಲೂಕಿನ ಬಿಜ್ಜವಾರ ಲೋಕೇಶ್‌ ಅವರದು ಮೊದಲು ಕೇಳಿಬರುವ ಹೆಸರು. ಆರ್‌ಎಸ್‌ಎಸ್‌ ಮೂಲದಿಂದ ಬಂದ ಬಿಜ್ಜವಾರ ಲೋಕೇಶ್‌ ಈಗಾಗಲೇ ಚುನಾವಣೆ ನಿರ್ವಹಣೆ ಮತ್ತು ತಂತ್ರಗಾರಿಕೆಯ ಮೂಲಕ ರಾಷ್ಟ್ರಮಟ್ಟದ ಬಿಜೆಪಿ ನಾಯಕರೊಡನೆ ಗುರುತಿಸಿಕೊಂಡವರು.   ಒಂದು ಸುತ್ತಿನ ತಯಾರಿಯನ್ನೂ ನಡೆಸಿರುವ ಲೋಕೇಶ್‌ ಅವರಿಗೆ ಚಿಕ್ಕಬಳ್ಳಾಪುರದ ಟಿಕೆಟ್‌ ಸಿಗುವುದು ಬಹುತೇಕ ಖಚಿತವೆನ್ನಲಾಗಿದೆ..

ಜೊತೆಗೆ ಎಂಟಿಬಿ ಪುತ್ರ ಪುರುಷೋತ್ತಮ್‌ ಎಂಟಿಬಿ, ಮಾಜಿ ಸಚಿವ ಕೆ.ಸುಧಾಕರ್‌ ಸೇರಿದಂತೆ ಹಲವರ ಹೆಸರು ಕೇಳಿಬಂದಿದ್ದು,  ಲೋಕಸಭಾ ಚುನಾವಣೆ ಟಿಕೆಟ್‌ಗೆ ಕೈ ಕಲಹ ತಾರಕಕ್ಕೇರುವ ಸಂಭವವಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಸಮಸ್ಯೆಗಳೇನು ?

ಕೃಷಿಪ್ರಧಾನವಾದ ಈ ಜಿಲ್ಲೆಗೆ ಅಂತರ್ಜಲ ಮಟ್ಟ ಕುಸಿತ ಹಾಗೂ ನೀರಿನ ಕೊರತೆ ಶಾಪವಾಗಿ ಪರಿಣಮಿಸಿದೆ. ಕೃಷಿ ಕಾರ್ಮಿಕರ ವಲಸೆಯಿಂದ ಜನರು ತತ್ತರಿಸಿಹೋಗುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಕಣ್ಣಿನಿಂದಾಗಿ ಜಮೀನುಗಳೆಲ್ಲಾ ಲೇಔಟ್‌ ಗಳಾಗಿ ಮಾರ್ಪಾಡಾಗುತ್ತಿದೆ.. ಆಂಧ್ರದೊಂದಿಗೆ ಗಡಿ ಹಂಚಿಕೊಂಡಿರುವ ಈ ಕ್ಷೇತ್ರವನ್ನು  ಇಂದಿಗೂ ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿರುವುದು ದುರಂತ!

ತೋಟಗಾರಿಕಾ ಬೆಳೆಗಳ ಕುಸಿತ, ನಿರುದ್ಯೋಗ ಮತ್ತು ಬಡತನ ಹೆಚ್ಚಳ ಈ ಜಿಲ್ಲೆಯ ಪ್ರಮುಖ ಸಮಸ್ಯೆಗಳು. ಇಲ್ಲಿ  ಸ್ಪರ್ಧಿಸುವ ಪ್ರತಿ ರಾಜಕಾರಣಿಗಳು ಇವೇ ವಿಷಯಗಳನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಉಂಟು . ಆದರೆ ಇದುವರೆಗೂ ಕ್ಷೇತ್ರ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಂಡಿಲ್ಲ.

ಪಕ್ಷಗಳ ಬಲಾಬಲ

ಎಂಟು ವಿಧಾನಸಭಾ  ಸ್ಥಾನಗಳಿರುವ ಈ ಲೋಕಸಭಾ ಕ್ಷೇತ್ರದಲ್ಲಿ ಯಲಹಂಕ, ಮತ್ತು ದೊಡ್ಡ ಬಳ್ಳಾಪುರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಮಿಕ್ಕಂತೆ ಚಿಕ್ಕಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಹೊಸಕೋಟೆ, ಬಾಗೇಪಲ್ಲಿಯಲ್ಲಿ ಕಾಂಗ್ರೆಸ್‌ ಗೆದ್ದಿದೆ.. ಗೌರಿಬಿದನೂರು ಕ್ಷೇತ್ರದಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ.

ಹೀಗಾಗಿ ಇಲ್ಲಿ ಕಾಂಗ್ರೆಸ್‌ ಬಲ ಬಿಜೆಪಿಗಿಂತ ಒಂದು ಕೈ ಮೇಲಾಗಿದೆ.  ಜೊತೆಗೆ ಗೆದ್ದಿರುವ ಎಲ್ಲಾ ಅಭ್ಯರ್ಥಿಗಳ ಮತಗಳ ಅಂತರ ೧೦-೨೦ ಸಾವಿರ ಆಸುಪಾಸಿನಲ್ಲಿರುವುದರಿಂದ ಎರಡೂ ಪಕ್ಷಗಳ ನಡುವೆ ತೀವ್ರ ಹಣಾಹಣಿ ನಡೆಯುವುದಂತೂ ಸ್ಪಷ್ಟ.

ಈ ಬಾರಿಯ ಚುನಾವಣಾ ಅಂಶವೇನು?

ಕೆ.ಸಿ. ವ್ಯಾಲಿ ಕಾಮಗಾರಿ, ನೀರು ಕೊರತೆ ಸಮಸ್ಯೆಗೆ ಪರಿಹಾರ, ಶಾಶ್ವತ ನೀರಾವರಿ ಯೋಜನೆಯ ಭರವಸೆ, ದೊಡ್ಡಬಳ್ಳಾಪುರದ ಅಪರೆಲ್‌ ಪಾರ್ಕ್‌ ಗೆ ಕಾಯಕಲ್ಪ, ನಿರುದ್ಯೋಗ ಹೆಚ್ಚಳ ತಡೆಗೆ ಕೈಗಾರಿಕೆಗಳ ಸ್ಥಾಪನೆ, ಉತ್ತರ ಪಿನಾಕಿನಿ ನದಿ ಮರು ಪೂರಣ ಮುಂತಾದವುಗಳು ಈ ಬಾರಿ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಬಲ್ಲವು.

ಇವುಗಳೊಡನೆ ರೈತರ ಬಹುದಿನದ ಬೇಡಿಕೆಗಳಾಗಿರುವ ಕೋಲ್ಡ್‌ ಸ್ಟೋರೇಜ್‌ ಸ್ಥಾಪನೆ, ರೇಷ್ಮೆ ಕ್ಲಸ್ಟರ್‌, ಹಣ್ಣುಗಳ ಸಂಸ್ಕರಣಾ ಘಟಕ ನಿರ್ಮಾಣ, ಕೃಷಿ ಅಭಿವೃದ್ಧಿಗೆ ಒತ್ತು ಮುಂತಾದವುಗಳ ಭರವಸೆ ಮತವನ್ನು ಪರಿವರ್ತಿಸುವ ಶಕ್ತಿ ಹೊಂದಿರುವುದಂತೂ ನಿಜ.

ನಂದಿ ಬೆಟ್ಟ, ಸ್ಕಂದ ಗಿರಿ ಬೆಟ್ಟ, ಇಶಾ ಫೌಂಡೇಶನ್ ‌ ಅಭಿವೃದ್ಧಿಪಡಿಸಿರುವ ಬೃಹತ್‌ ಈಶ್ವರ , ಪುರಾತನ ದೇಗುಲಗಳು, ಕಣ್ಮನ ಸೆಳೆಯುವ ಗಿರಿಶ್ರೇಣಿಗಳಿಂದ ತುಂಬಿ ತುಳುಕುತ್ತಿದ್ದರೂ ಸಹ ಇದುವರೆಗೂ ಚಿಕ್ಕಬಳ್ಳಾಪುರವನ್ನು ಪ್ರವಾಸಿ ತಾಣವನ್ನಾಗಿಸುವ ಬಗ್ಗೆ ಯಾವ ರಾಜಕಾರಣಿಯೂ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.

ನಾಡಿನ ಅತ್ಯುತ್ತಮ ಪ್ರವಾಸಿ ತಾಣವಾಗಬಲ್ಲ ಎಲ್ಲಾ ಅರ್ಹತೆಗಳಿರುವ ಈ ಜಿಲ್ಲೆಯನ್ನು ತುಸು ಅಭಿವೃದ್ಧಿಗೊಳಿಸಿದರೆ ಇಲ್ಲಿನ ಜನರ ಜೀವನ ಮಟ್ಟದಲ್ಲೂ ಸುಧಾರಣೆ ಕಾಣಬಹುದಾಗಿದೆ.

ಈ ಎಲ್ಲ ದೃಷ್ಟಿಯಿಂದ ಒಬ್ಬ ಸ್ಥಳೀಯ , ಸಮರ್ಥ, ವಿದ್ಯಾವಂತ, ಕಳಂಕರಹಿತ ಯುವನೇತಾರ ಇಲ್ಲಿ ಆರಿಸಿ ಬರಬೇಕೆಂಬುದು ಕ್ಷೇತ್ರದ ಜನತೆಯ ಆಶಯವಾಗಿದೆ.

Add Your Heading Text Here

Leave a Reply

Your email address will not be published. Required fields are marked *