ಬಾಗಲಕೋಟೆಯಲ್ಲಿ ಮತ್ತಷ್ಟು ʻಪ್ರಕಾಶʼಮಾನವಾಗುವುದೇ ಬಿಜೆಪಿ?
ದೇಶವನ್ನು ಅಭಿವೃದ್ಧಿ ಪಥದತ್ತದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ… ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರಕಾರ … ಇವೆರಡರ ನಡುವೆ ಅಸಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವ ಜಾತ್ಯತೀತ ಜನತಾದಳ ಪಕ್ಷ.
ಹೌದು, ಎರಡು ರಾಷ್ಟ್ರೀಯ ಪಕ್ಷಗಳಿಂದ ಮುಂಬರುವ ಲೋಕಸಭಾ ಚುನಾವಣೆಗೆ ತೆರೆಮರೆಯ ಕಸರತ್ತು ನಡೆಯುತ್ತಿದೆ. ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿರುವ ಬಾಗಲಕೋಟೆಯಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಮೂಲಕ ತನ್ನ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಗುರಿಯನ್ನು ಕೇಸರಿಪಡೆ ಹೊಂದಿದ್ದರೆ, ಕಾಂಗ್ರೆಸ್ ಗೆಲುವಿನ ಖಾತೆ ತೆರೆಯುವ ಉಮೇದಿನಲ್ಲಿದೆ.
ಮತ್ತೊಂದೆಡೆ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಪ್ರತಿನಿಧಿಸಿದ್ದರಿಂದ ಕಾಂಗ್ರೆಸ್ ಈ ಲೋಕಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸುವ ಸಾಧ್ಯತೆ ಇದೆ. ಮತ್ತೊಂದೆಡೆ ಜೆಡಿಎಸ್ ಕಳೆದುಕೊಂಡಿರುವ ಹಿಂದುಳಿದ, ಅಲ್ಪ ಸಂಖ್ಯಾತ ಹಾಗೂ ದಲಿತ ಮತಗಳನ್ನು ಪಡೆಯಲು ಲಿಂಗಾಯತ, ಮುಸ್ಲಿಮ್ ಅಥವಾ ಗಾಣಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಕಾಂಗ್ರೆಸ್ ಈ ಹಿಂದೆ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಅವರನ್ನು ಕಾಂಗ್ರೆಸ್ ಅದೃಷ್ಟ ಪರೀಕ್ಷೆಗೆ ಮತ್ತೊಮ್ಮೆ ಕಣಕ್ಕಿಳಿಸುವ ಸಾಧ್ಯತೆ ಇದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದೀಗೌಡರ್ ಪರ್ವತಗೌಡ ಚಂದನಗೌಡ ಸತತ ನಾಲ್ಕು ಅವಧಿಯಲ್ಲಿ ಗೆಲುವು ಬಾರಿಸುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಅವರಿಗೆ ಬಿಜೆಪಿಯಿಂದ ಟಿಕೆಟ್ ದೊರೆಯುವುದು ಅನುಮಾನವಾಗಿದೆ.
ಗದ್ದೀಗೌಡರ್ ಅವರಿಗೆ ಈಗ 74 ವರ್ಷ. ಅಲ್ಲದೇ ಒಂದು ಬಾರಿ ಓಪನ್ ಹಾರ್ಟ್ ಸರ್ಜರಿ ಆಗಿದೆ. ಬಿಜೆಪಿಯ ನಿಯಮದ ಪ್ರಕಾರ 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡುವುದು ಕಡಿಮೆ. ಅಲ್ಲದೇ ಗದ್ದೀಗೌಡರ್ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮತ್ತೊಂದೆಡೆ ಜನ ಸಂಪರ್ಕದಿಂದಲೇ ದೂರ ಇಳಿದಿದೆ. ಅದು ಅಲ್ಲದೇ ಬಿಜೆಪಿಯ ಶಕ್ತಿಯಾದ ಬಿಜೆಪಿ ಕಾರ್ಯಕರ್ತರು ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರಿಂದ ದೂರ ಉಳಿದಿದ್ದಾರೆ. ಇದರಿಂದ ಅವರು ಈ ಬಾರಿ ಕಣಕ್ಕಿಳಿಯುವ ಬಗ್ಗೆ ಅನುಮಾನವಿದೆ. ಒಂದು ವೇಳೆ ಗದ್ದೀಗೌಡರ್ ಕಣಕ್ಕಿಳಿಯಲು ಬಯಸಿದರೂ ಹೈಕಮಾಂಡ್ ಹೊಸಬರಿಗೆ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಗೆಲುವಿನ ಅಭ್ಯರ್ಥಿ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡಲೂಬಹುದು.
ಈ ಎಲ್ಲಾ ಬೆಳವಣಿಗೆ ನಡುವೆ ಬಿಜೆಪಿ ಹೊಸ ಮುಖಗಳಿಗೆ ಅವಕಾಶ ನೀಡಲು ಚಿಂತನೆ ನಡೆಸಿದೆ. ಅದರಲ್ಲೂ ಚಿತ್ರದುರ್ಗ ಮೂಲದ ಡಾ. ಪ್ರಕಾಶ್ ಜೆ.ಪರಪ್ಪ ಅವರನ್ನು ಬಾಗಲಕೋಟೆಯಲ್ಲಿ ಕಣಕ್ಕಿಳಿಸುವ ಪ್ರಯತ್ನಗಳೂ ಕೂಡ ನಡೆದಿವೆ.. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಹೆಸರು ಕೂಡ ಕೇಳಿಬರುತ್ತಿದೆ.
ಬಿಜೆಪಿ ಹೈಕಮಾಂಡ್ ಟಿಕೆಟ್ ಪ್ರಕಟಿಸುವಾಗ ಸಾಕಷ್ಟು ಅಚ್ಚರಿಗಳನ್ನು ನೀಡುತ್ತಾ ಬಂದಿದೆ. ಪಕ್ಷಕ್ಕಾಗಿ ದುಡಿದ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದೆ. ಈ ಬಾರಿ ಕಾಂಗ್ರೆಸ್ ಕೂಡ ತನ್ನ ಬಲ ಹೆಚ್ಚಿಸಿಕೊಂಡಿರುವುದರಿಂದ ಹೈಕಮಾಂಡ್ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದು, ಯಾರಿಗೆ ಅವಕಾಶ ನೀಡುತ್ತದೆ ಎಂಬುದು ಕಾದು ನೋಡಬೇಕಾಗಿದೆ.
ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ ಕಳೆದ ವಿಧಾನಸಭೆಯಲ್ಲಿ ಸೋತಿರುವುದರಿಂದ ಅವರಿಗೆ ಲೋಕಸಭೆಗೆ ಟಿಕೆಟ್ ಕೊಡುವುದು ಎಷ್ಟು ಸರಿ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದ್ದರಿಂದ ಹೊಸಬರಿಗೆ ಹಾಗೂ ಪಕ್ಷಕ್ಕಾಗಿ ವರ್ಷಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಅವಕಾಶ ಇದೆ.
ಇದರಿಂದ ಈ ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರ ಕುತೂಹಲ ಮೂಡಿಸಿದ್ದು, ಕೇಸರಿ ಪಡೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ದರೆ, ಕಾಂಗ್ರೆಸ್ ಖಾತೆ ತೆರೆಯುವ ಗುರಿ ಹೊಂದಿದೆ. ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದು ಕಾದು ನೋಡಬೇಕಿದೆ.