ಏಷ್ಯನ್ ಗೇಮ್ಸ್: ಭಾರತ ಶೂಟಿಂಗ್ ತಂಡಕ್ಕೆ 10 ಮೀ. ಏರ್ ಪಿಸ್ತೂಲ್ ನಲ್ಲಿ ಚಿನ್ನ!
ಭಾರತದ ಶೂಟರ್ ಗಳ ತಂಡ ಏಷ್ಯನ್ ಗೇಮ್ಸ್ ನಲ್ಲಿ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರೆ, ವೈಯಕ್ತಿಕ ವಿಭಾಗದಲ್ಲಿ ಮುಗ್ಗರಿಸಿದೆ.
ಗುರುವಾರ ನಡೆದ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದ ಫೈನಲ್ ನಲ್ಲಿ ಸರ್ಬಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರನ್ನೊಳಗೊಂಡ ಭಾರತ ತಂಡ ರೋಚಕ ಹಣಾಹಣಿಯಲ್ಲಿ ಪ್ರತಿಸ್ಪರ್ಧಿ ಚೀನಾವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು.
ಈ ಮೂಲಕ ಭಾರತ ಶೂಟಿಂಗ್ ವಿಭಾಗದಲ್ಲಿ4 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದೆ.
ಭಾರತದ ಶೂಟರ್ ಗಳು 1734 ಅಂಕದೊಂದಿಗೆ ಪ್ರಥಮ ಸ್ಥಾನ ಅಲಂಕರಿಸಿದರೆ, ಚೀನಾ ತಂಡ 1733 ಅಂಕದೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ವಿಯೆಟ್ನಾಂ ತಂಡ 1730 ಅಂಕದೊಂದಿಗೆ ಕಂಚಿನ ಪದಕ ಗಳಿಸಿತು.
ವೈಯಕ್ತಿಕ ವಿಭಾಗದಲ್ಲಿ ಸರ್ಬೋಜಿತ್ ಸಿಂ 4ನೇ ಸ್ಥಾನಕ್ಕೆ ಕುಸಿದರೆ, ಅರ್ಜುನ್ ಪ್ರಶಸ್ತಿ ಸುತ್ತು ಪ್ರವೇಶಿಸಲು ವಿಫಲರಾದರು. ಚೀನಾ ಮತ್ತು ಕೊರಿಯಾ ಸ್ಪರ್ಧಿಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಹಂಚಿಕೊಂಡರು