ಏಷ್ಯನ್ ಗೇಮ್ಸ್: ಚಿನ್ನ ಗೆದ್ದ ಭಾರತ ವನಿತೆಯರ ಕ್ರಿಕೆಟ್ ತಂಡ
ಭಾರತ ವನಿತೆಯರ ತಂಡ 19 ರನ್ ಗಳಿಂದ ಶ್ರೀಲಂಕಾ ತಂಡದ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಏಷ್ಯನ್ ಗೇಮ್ಸ್ ನ ಕ್ರಿಕೆಟ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದೆ.
ಹ್ಯಾಂಗ್ಜು ನಲ್ಲಿ ಸೋಮವಾರ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 116 ರನ್ ಕಲೆ ಹಾಕಿತು. ಸುಲಭ ಗುರಿ ಬೆಂಬತ್ತಿದ ಶ್ರೀಲಂಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 97 ರನ್ ಗಳಿಸಲಷ್ಟೇ ಶಕ್ತವಾಯಿತು.
ಕಳೆದ ವರ್ಷ ಕಾಮನ್ ವೆಲ್ತ್ ಮತ್ತು ವಿಶ್ವಕಪ್ ನಲ್ಲಿ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದ್ದ ಭಾರತ ವನಿತೆಯರು ಈ ಬಾರಿ ಅಲ್ಪ ಮೊತ್ತ ದಾಖಲಿಸಿದರೂ ರೋಚಕ ಜಯ ಸಾಧಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಭಾರತದ ಪರ ಮಾರಕ ದಾಳಿ ನಡೆಸಿದ ಟಿಟಾಸ್ ಸಾಧು 4 ಓವರ್ ಗಳ ದಾಳಿಯಲ್ಲಿ ಕೇವಲ 6 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಗಳಿಸಿದರು.
ಶ್ರೀಲಂಕಾ ಒಂದು ಹಂತದಲ್ಲಿ 14 ರನ್ ಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಈ ವೇಳೆ ತಂಡದ ಪರ ಹಸಿನಿ ಪೆರೆರಾ (25) ಮತ್ತು ನೀಲಾಕ್ಷಿ ಡಿ ಸಿಲ್ವಾ (23) ನಾಲ್ಕನೇ ವಿಕೆಟ್ ಗೆ 36 ರನ್ ಜೊತೆಯಾಟ ನಿಭಾಯಿಸಿದರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆ ತಂಡ ಕುಸಿತ ಅನುಭವಿಸಿ ಸೋಲುಂಡಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂದಾನ (46) ಮತ್ತು ಜೆಮಿಹಾ ರೋಡ್ರಿಗಜ್ (42) ಎರಡನೇ ವಿಕೆಟ್ ಗೆ 69 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಆದರೆ ನಂತರದ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ನಿರ್ಗಮಿಸಿದ್ದರಿಂದ ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು.