ಲೋಕಸಭೆಯಲ್ಲಿ ಮಂಡನೆಯಾಯ್ತು ಮಹಿಳಾ ಮೀಸಲು ಮಸೂದೆ
ನವದೆಹಲಿ: ಮಹತ್ವದ ಮಹಿಳಾ ಮೀಸಲು ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಅವರು ಹೊಸ ಸಂಸತ್ ಭವನದಲ್ಲಿ ಮಸೂದೆ ಮಂಡಿಸಿದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿತ್ತು.
ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. “ನಾರಿ ಶಕ್ತಿ ವಂದನಾ ಅಧಿನಿಯಮ” ಎಂದು ಈ ಮಸೂದೆಯನ್ನು ಹೆಸರಿಸಲಾಗಿದೆ. ನಾಳೆ ಲೋಕಸಭೆಯಲ್ಲಿ ಪಾಸಾಗಲಿದೆ ಎಂದು ಹೇಳಲಾಗುತ್ತಿದೆ.
ಮಸೂದೆ ಪಾಸಾದರೆ ಲೋಕಸಭೆ (ಸಂಸತ್ತಿನ ಕೆಳಮನೆ), ವಿಧಾನ ಸಭೆಗಳು (ರಾಜ್ಯ ಶಾಸಕಾಂಗ ಸಭೆಗಳು), ಮತ್ತು ದೆಹಲಿ ಅಸೆಂಬ್ಲಿಯಲ್ಲಿ 1/3 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.ಮಹಿಳೆಯರ ಕೋಟಾದಲ್ಲಿ 1/3ರಷ್ಟು ಮೀಸಲಾತಿ ಸೀಟುಗಳನ್ನು ಎಸ್ಸಿ ಇಲ್ಲವೇ ಎಸ್ಟಿ ಸಮುದಾಯದವರಿಗೆ ಹಂಚಿಕೆ ಮಾಡಬೇಕು.