December 23, 2024

ಒಂದು ದೇಶ, ಒಂದು ಚುನಾವಣೆ ನಡೆದರೆ ಏನಾಗುತ್ತೆ?

1 min read


ಸುದೀರ್ಘ ಸಮಯದಿಂದ ಪ್ರತಿಪಾದಿಸುತ್ತಾ ಬಂದಿರುವ ಒಂದು ದೇಶ, ಒಂದು ಚುನಾವಣೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇದೇ ವರ್ಷ ಜಾರಿಗೆ ತರಲು ಉದ್ದೇಶಿಸಿದೆ.
ಸೆಪ್ಟೆಂಬರ್‌ 18ರಿಂದ 22ರವರೆಗೆ ವಿಶೇಷ ಲೋಕಸಭಾ ಅಧಿವೇಶನ ಕರೆದಿದ್ದು, ಇದನ್ನು ಅಮೃತ್‌ ಕಾಲ್‌ ಅಧಿವೇಶನ ಎಂದೇ ಹೇಳಲಾಗಿದೆ. ಈ ಅಧಿವೇಶನದಲ್ಲಿ ಮೂರು ಮಸೂದೆಗಳನ್ನು ಮಂಡಿಸಿ ಚರ್ಚೆ ನಡೆಸಲು 5 ದಿನಗಳ ಕಾಲಮಿತಿಯನ್ನು ನಿಗದಿಪಡಿಸಿದೆ. ವಿಶೇಷ ಅಂದರೆ ಅಧಿವೇಶನದ ಕರೆದ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದಲ್ಲಿ ಒಂದು ದೇಶ, ಒಂದು ಚುನಾವಣೆಯ ಸಾಧಕ-ಬಾಧಕಗಳ ಕುರಿತು ಪರಿಶೀಲನೆಗೆ ಸಮಿತಿಯನ್ನೂ ರಚಿಸಲಾಗಿದೆ.
ಯಾಕೆ ಒಂದು ದೇಶ, ಒಂದು ಚುನಾವಣೆ?
1967ರವರೆಗೆ ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಂದೇ ಬಾರಿ ನಡೆಯುತ್ತಿದ್ದವು. ನಂತರದ ದಿನಗಳಲ್ಲಿ ವಿಧಾನಸಭೆ ವಿಸರ್ಜನೆ, ಪೂರ್ಣ ಪ್ರಮಾಣದಲ್ಲಿ ಸರಕಾರ ಅಸ್ತಿತ್ವಕ್ಕೆ ಬಾರದೇ ಇರುವುದು, ಸರಕಾರ ಪತನ ಸೇರಿದಂತೆ ವಿವಿಧ ಕಾರಣಗಳಿಗೆ ವಿಧಾನಸಭೆಗಳು ಬೇರೆ ಬೇರೆ ಸಮಯದಲ್ಲಿ ನಡೆಯುತ್ತಾ ಬಂದವು.ಇದರಿಂದ ದೇಶದಲ್ಲಿ ಪ್ರತಿ ವರ್ಷ ಚುನಾವಣೆ ನಡೆಯುವಂತಾಗಿದೆ.
ಪ್ರತಿ ವರ್ಷ ನಾಲ್ಕೈದು ರಾಜ್ಯಗಳ ಚುನಾವಣೆ ನಡೆಸುವ ಪರಿಸ್ಥಿತಿಯಿಂದ ಆರ್ಥಿಕ ವೆಚ್ಚ ಹೆಚ್ಚಾಗುತ್ತದೆ. ಅಲ್ಲದೇ ಸಮಯವೂ ವ್ಯರ್ಥವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಮಸೂದೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ವಿರೋಧ ಏಕೆ?
ಬಿಜೆಪಿ ದೇಶದಲ್ಲಿ ಒಂದೇ ಬಾರಿ ಚುನಾವಣೆ ನಡೆಸಲು ಮುಂದಾಗಿರುವುದು ಖರ್ಚು, ವೆಚ್ಚ ಅಥವಾ ಸಮಯ ವ್ಯರ್ಥ ತಪ್ಪಿಸುವ ಉದ್ದೇಶದಿಂದ ಒಂದು ದೇಶ ಒಂದು ಚುನಾವಣೆಗೆ ಮುಂದಾಗಿಲ್ಲ. ಬದಲಿಗೆ ರಾಜ್ಯಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ರಾಜ್ಯಗಳ ಮೇಲೆ ಕೇಂದ್ರ ಹಿಡಿತ ಸಾಧಿಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ ಎನ್ನಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸತತ ಎರಡು ಬಾರಿ ಗೆದ್ದಿದ್ದರೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ಪಶ್ಚಿಮ ಬಂಗಾಳ, ಕರ್ನಾಟಕ ಮುಂತಾದ ರಾಜ್ಯಗಳ ಚುನಾವಣಾ ಫಲಿತಾಂಶ.
ಮೋದಿ ಅಲೆಯ ಮೇಲೆ ಬಿಜೆಪಿ ಎಷ್ಟೇ ಪ್ರಾಬಲ್ಯ ಸಾಧಿಸಿದರೂ ದಕ್ಷಿಣ ಭಾರತದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪರದಾಡುತ್ತಿದೆ. ಕರ್ನಾಟಕದಲ್ಲಿ ಇದ್ದ ಅವಕಾಶವನ್ನು ಕಳೆದುಕೊಂಡಿದ್ದರಿಂದ ಬಿಜೆಪಿ ಆಘಾತಕ್ಕೆ ಒಳಗಾಗಿದೆ.
ಕೇಂದ್ರ ಒಂದು ವೇಳೆ ಒಂದು ದೇಶ, ಒಂದು ಚುನಾವಣೆ ನಡೆಸಿದರೆ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಸರಕಾರಗಳನ್ನು ಆಪರೇಷನ್‌ ಕಮಲ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಮಟ್ಟ ಹಾಕಿ ಬಿಡುತ್ತದೆ ಎಂಬ ಭೀತಿ ಕಾಡುತ್ತಿದೆ.

ಕೇಂದ್ರ ಸರಕಾರ ಯಾವುದೇ ನಿಯಮ ಜಾರಿ ಮಾಡಿದರೂ ರಾಜ್ಯಗಳು ಒಪ್ಪದೇ ಆ ನಿಯಮ ಜಾರಿ ಆಗುವುದು ಅಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹಿಡಿದು ಕೇಂದ್ರದ ಬಹುತೇಕ ಯೋಜನೆಗಳು ಕಾಗದದ ಮೇಲಷ್ಟೇ ಉಳಿದಿವೆ. ಅಲ್ಲದೇ ರಾಜ್ಯಗಳ ಸಹಕಾರ ಇಲ್ಲದೇ ಕೇಂದ್ರ ನಿಯಮಗಳು ಜಾರಿಯಾಗದೇ ಅಸಹಾಸಕ ಸ್ಥಿತಿ ವ್ಯಕ್ತಪಡಿಸುವಂತಾಗಿದೆ.
ರಾಜಕೀಯ ಮೇಲುಗೈ?
ಒಂದು ದೇಶ, ಒಂದು ಚುನಾವಣೆ ಕೇಂದ್ರ ಪ್ರತಿಪಕ್ಷಗಳನ್ನು ಹೆಣೆಯಲು ಬಿಜೆಪಿಯ ಪ್ರಯತ್ನ ಇದಾಗಿದೆ ಹೊರತು ಚುನಾವಣಾ ವೆಚ್ಚ ತಗ್ಗಿಸಲು ಅಥವಾ ಸಮಯ ವ್ಯರ್ಥ ಆಗದಂತೆ ತಡೆಯಲು ಅಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಬಿಜೆಪಿ ಈಗಾಗಲೇ ಅಸ್ತಿತ್ವದಲ್ಲಿರುವ ಸರಕಾರವನ್ನೇ ಪತನಗೊಳಿಸಿ ಹಲವು ರಾಜ್ಯಗಳಲ್ಲಿ ಮರು ಚುನಾವಣೆ, ಉಪ ಚುನಾವಣೆಗಳನ್ನು ನಡೆಸಿದೆ. ಮತದಾರರಿಂದ ನೇರವಾಗಿ ಅಧಿಕಾರಕ್ಕೆ ಬರಲು ಬಿಜೆಪಿಗೆ ರಾಜ್ಯಗಳಲ್ಲಿ ಕಷ್ಟವಾಗುತ್ತಿದೆ. ಇದರಿಂದ ಒಂದೇ ಬಾರಿ ಚುನಾವಣೆ ನಡೆದರೆ ಎಲ್ಲಾ ರಾಜ್ಯಗಳಲ್ಲೂ ಆಪರೇಷನ್‌ ಕಮಲ ಮಾಡಿ ಎಲ್ಲಾ ರಾಜ್ಯಗಳಲ್ಲಿ ತಮ್ಮದೇ ಸರಕಾರ ಬರುವಂತೆ ಒತ್ತಡ ಹೇರುತ್ತದೆ. ಒಂದು ವೇಳೆ ಬೇರೆ ಪಕ್ಷಗಳ ನಾಯಕರು ಮಣಿಯದೇ ಇದ್ದರೆ ಇಡಿ, ಐಟಿ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕಿ ಒತ್ತಡ ಹೇರುತ್ತದೆ. ಇದರಿಂದ ಒಂದು ದೇಶ, ಒಂದು ಚುನಾವಣೆ, ಒಂದು ಪಕ್ಷ ಎಂಬ ಸ್ಥಿತಿಗೆ ದೇಶ ರೂಪಿಸಲಾಗುತ್ತಿದೆ ಎಂಬ ಭೀತಿ ಪ್ರತಿಪಕ್ಷಗಳನ್ನು ಕಾಡುತ್ತಿದೆ.
ಯಾವಾಗ ಚುನಾವಣೆ?
ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಒಂದು ದೇಶ, ಒಂದು ಚುನಾವಣೆ ತಂತ್ರವನ್ನು ಪ್ರಯೋಗಿಸಿದ್ದು, ರಾಜ್ಯಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ.
ಕೇಂದ್ರ ಸರಕಾರ ಡಿಸೆಂಬರ್‌ ನಲ್ಲಿ ಲೋಕಸಭೆ ಮತ್ತು ದೇಶದ ಎಲ್ಲಾ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಒಂದು ದೇಶ, ಒಂದು ಚುನಾವಣೆ ನಿಯಮ ಜಾರಿಗೆ ತರಲು ತಡವಾದರೆ, 6 ತಿಂಗಳು ತಡವಾಗಿ ಮತದಾನಕ್ಕೆ ಸಮಯ ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಇದರಿಂದ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲೂ ವಿಧಾನಸಭೆಯೂ ವಿಸರ್ಜನೆಗೊಂಡು ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *