ಹಸಿದವರ ಹೊಟ್ಟೆಗೆ ಶುಚಿ, ರುಚಿ, ಪೌಷ್ಠಿಕತೆಯ “ಸ್ವಾದಾಮೃತ”
ಒಂದು ತುತ್ತು ಅನ್ನದ ಬೆಲೆಯನ್ನು ಹಸಿದವರೇ ಬಲ್ಲರು. ಈ ಲೋಕವನ್ನು ಸ್ವರ್ಗವಾಗಿಸುವ ಪ್ರಕ್ರಿಯೆಯಲ್ಲಿ “ಅನ್ನವನು ಇಕ್ಕುವ” ಕ್ರಿಯೆಗೆ ಶರಣರು ಮೊದಲ ಆದ್ಯತೆ ನೀಡಿದ್ದಾರೆ. ಆದರೆ ಇಂದಿನ ಆಧುನಿಕ ದಿನಮಾನಗಳಲ್ಲಿ ಇಕ್ಕುವ ಅನ್ನವೇ ವಿಷವಾದರೆ? ಕ್ರಿಮಿನಾಶಕ, ರಸಗೊಬ್ಬರಗಳಿಂದ ತಾಯಿ ಮಗುವಿಗೆ ಉಣಿಸುವ ಅನ್ನವೇ ಹಾನಿಕರವಾದರೆ?
ಶುದ್ಧ, ತಾಜಾ ಆಹಾರವನ್ನು ಕೊಂಡು ಸೇವಿಸಲು ಪ್ರತಿಯೊಬ್ಬರಿಗೂ ಸಾಧ್ಯವಿಲ್ಲದೇ ಹೋದರೆ?
ಇಂಥದ್ದೊಂದು ಆಲೋಚನೆ ಎಲ್ಲರಿಗೂ ಬಂದಿರಲಿಕ್ಕೂ ಸಾಕು. ಸ್ವಾದ ಎಂದರೆ ರುಚಿ. ಅಮೃತ ಎಂದರೆ ಜೀವವನ್ನು ಉಳಿಸುವ ದಿವ್ಯೌಷಧ. ಸಮುದಾಯದ ವ್ಯಾಪ್ತಿಯಲ್ಲಿ ಅಡುಗೆ ಮನೆಯೊಂದನ್ನು ನಿರ್ಮಿಸಿ ಶುಚಿ ರುಚಿಯಾದ ಆಹಾರ ವಿತರಿಸಿದರೆ ಹೇಗಿದ್ದೀತು.
ಅದು ಯಾರದೂ ಅಲ್ಲದ ಅಡುಗೆ ಮನೆ, ಆದರೆ ಪ್ರತಿಯೊಬ್ಬರೂ ನಮ್ಮ ಅಡುಗೆ ಮನೆ ಎಂದು ಹೇಳಬಹುದಾದ ಅಡುಗೆ ಮನೆ. ಅಲ್ಲಿ ಶುಚಿತ್ವಕ್ಕೆ ಮೊದಲ ಆದ್ಯತೆ. ಅಲ್ಲಿ ಬರುವ ಪ್ರತಿಯೊಬ್ಬರಿಗೂ ಸ್ವಾದಿಷ್ಟವಾದ, ಪುಷ್ಟಿದಾಯಕವಾದ ಹಾಗೂ ಸಾವಯವ ಪದಾರ್ಥಗಳ ತಾಜಾ ಆಹಾರವನ್ನು ತಯಾರಿಸಿ ಉಣಬಡಿಸುವುದು “ಸ್ವಾದಿಷ್ಟಾಮೃತ” ಪರಿಕಲ್ಪನೆಯ ಮೊದಲ ಉದ್ದೇಶ.
ಉಚಿತವಾಗಿ ಕೊಟ್ಟರೆ ಆಹಾರವನ್ನು ವ್ಯರ್ಥ ಮಾಡಬಹುದೆಂಬ ಮುಂದಾಲೋಚನೆಯಿಂದ ಅತಿ ಕಡಿಮೆ ಬೆಲೆಯಲ್ಲಿ ಆಹಾರ ಪೂರೈಸುವುದು “ಸ್ವಾದಾಮೃತ” ದ ಧ್ಯೇಯ. ಆದರೆ ಎರಡು ಹೊತ್ತಿನ ಊಟಕ್ಕೂ ಸಹ ತತ್ವಾರ ಇರುವವರು ಉಚಿತವಾಗಿ ಇಲ್ಲಿ ಆಹಾರ ಪಡೆಯಬಹುದು. ಈ ವೆಚ್ಚವನ್ನು ದಾನಿಗಳಿಂದ ಬರುವ ವಂತಿಗೆ ಹಣದಿಂದ ಸರಿದೂಗಿಸುವುದು “ಸ್ವಾದಾಮೃತದ” ಸಂಕಲ್ಪ.
ಗ್ರಾಮೀಣ ಭಾಗದಲ್ಲಿಯೇ ಬೆಳೆದವರಿಗೆ ಹಸಿವು, ಹಸಿದವರು ಹಾಗೂ ಹಸಿವನ್ನು ತಣಿಸುವ ದಾಸೋಹ ಪರಂಪರೆ ಮೂರೂ ಸಹ ಹೊಸದಲ್ಲ. ಒಂದು ಅಗಳು ಅನ್ನದ ಹಿಂದೆ ಎಷ್ಟು ಸಾವಿರ ಮಂದಿಯ ಶ್ರಮ ಇರುತ್ತದೆಯೆಂಬುದನ್ನೂ ಜನರು ಬಲ್ಲರು. ಉತ್ತಿದವರು, ಬಿತ್ತಿದವರು, ಬೆಳೆದವರು, ಒಕ್ಕಿದವರು, ಒಣಗಿಸಿದವರು, ಹಸನು ಮಾಡಿದವರು, ಸಾಗಿಸಿದವರು, ಮಾರಿದವರು, ಕೊಂಡವರು, ಅಡುಗೆ ಮಾಡಿದವರು…ಹೀಗೆ ಅಸಂಖ್ಯ ಜನರ ಶ್ರಮವನ್ನು ಹಾದು ಬರುವ ಅನ್ನವನ್ನು ಹಿರಿಯರು “ಅನ್ನ ಬ್ರಹ್ಮ” ಎನ್ನುವ ಮೂಲಕ ದೈವತ್ವಕ್ಕೇರಿಸಿದ್ದು ಸುಮ್ಮನೆ ಅಲ್ಲ.
ಇಂಥದ್ದೊಂದು ಪವಿತ್ರ ಕಾರ್ಯವನ್ನು ರಾಜ್ಯದ ಪ್ರತಿಯೊಂದು ಗ್ರಾಮಪಂಚಾಯಿತಿ ಮಟ್ಟದಲ್ಲಿಯೂ ವಿಸ್ತರಿಸುವುದು “ವಂದೇ ಭಾರತಂ” ಸಂಸ್ಥೆಯ ಕನಸು.