December 23, 2024

ಹಾಸನ ಲೋಕಸಭಾ ಕ್ಷೇತ್ರ: ಬಿಜೆಪಿಗೆ ಜೆಡಿಎಸ್‌ ಬೆಂಬಲ: ಪ್ರೀತಂ ಗೌಡ

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದು, ಜೆಡಿಎಸ್‌ ಬೆಂಬಲ ನೀಡಬಹುದು ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಹಾಸನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಒಂದು ವೇಳೆ ಮೈತ್ರಿ ಹೈಕಮಾಂಡ್‌ ಮಟ್ಟದಲ್ಲಿ ಆದರೆ ಜೆಡಿಎಸ್‌ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬಹುದು ಎಂದರು.
ಇದೇ ವೇಳೆ ವಿಧಾನಸಭೆ ಚುನಾವಣೆ ಆಗಿ ಮೂರು ತಿಂಗಳ ಹನಿಮೂನ್ ಸಮಯ ಕೂಡ ಮುಗಿದಿದ್ದು, ಹಾಸನ ಕ್ಷೇತ್ರದ ಶಾಸಕರು ನಗರಪಾಲಿಕೆಗೆ ಸೇರಿರುವ 25 ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಕಡೆ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಶಾಸಕ ಹೆಚ್.ಪಿ. ಸ್ವರೂಪ್ ಅವರ 3 ತಿಂಗಳ ಹನಿಮೂನ್ ಅವಧಿ ಮುಗಿದು ಹೋಗಿದ್ದು, ಇನ್ನು ಮೂರು ತಿಂಗಳಲ್ಲಿ ತಾಲೂಕಿನಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಗಮನಕೊಡಬೇಕು. ಸರಕಾರದೊಡನೆ ಸಮನ್ವಯ ಇಟ್ಟುಕೊಂಡು ಹೆಚ್ಚಿನ ಅನುದಾನ ತರುವ ಮೂಲಕ ಕ್ಷೇತ್ರ ಅಭಿವೃದ್ಧಿಪಡಿಸಬೇಕು.
ನನ್ನ ಅಧಿಕಾರ ಅವಧಿಯಲ್ಲಿ 25 ಗ್ರಾಮಗಳನ್ನು ನಗರಸಭೆಗೆ ಸೇರಿಸಲಾಗಿದೆ. ಪಾಲಿಕೆಯಾಗಿ ಮಾಡುವುದು ಹಾಗೂ ಈ ಗ್ರಾಮದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹೊಸ ಶಾಸಕರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಗಂಭೀರ ಚಿಂತನೆ ಮಾಡಲಿ ಎಂದರು.
ಮಾಜಿ ಶಾಸಕರು ದಿವಂಗತ ಎಚ್.ಎಸ್. ಪ್ರಕಾಶ್ 4 ಬಾರಿ ಶಾಸಕರಾಗಿದ್ದು, ಅವರ ಅವಧಿಯಲ್ಲಿ ಎಂದೂ ಸಹ ಕಸ ವಿಲೇವಾರಿ ಮಾಡಲು ಅಡ್ಡಿ ಉಂಟು ಮಾಡಿರಲಿಲ್ಲ. ಆದರೆ ಅವರ ಮಗ ಹೆಚ್.ಪಿ. ಸ್ವರೂಪ್ ಬೆಂಬಲಿಗರು ಕಸ ವಿಲೇವಾರಿಗೆ ಅಡ್ಡಿ ಮಾಡುತ್ತಿದ್ದಾರೆ. ಪ್ರತಿದಿನ ಸಂಘರ್ಷ ಬೇಡ ಎಂದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಗರ ಸಭೆ ಮೇಲ್ದರ್ಜೆಗೇರಿಸಿ ಪಾಲಿಕೆ ಮಾಡಲು ಶಿಫಾರಸು ಮಾಡಿದ್ದೇನೆ. ಈಗ ಕೆಲಸ ವಿಳಂಬವಾಗಿದೆ ಎನ್ನುವುದಕ್ಕಿಂತ ಮುಂದೆ ಆಗಬೇಕಾಗಿರುವ ಕೆಲಸದ ಕಡೆ ಗಮನ ಹರಿಸಲಿ ಎಂದು ಅವರು ಹೇಳಿದರು.
ಮಾಜಿ ಸಚಿವರು ಅವರ ಅವಧಿಯಲ್ಲಿ ಮೆಡಿಕಲ್ ಕಾಲೇಜು ಮಾಡಿದರು. ನಂತರ ನನ್ನ ಅವಧಿಯಲ್ಲಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನೂತನ ಶಾಸಕರು ಕೆಲಸ ಮಾಡಲಿ. ಆಗಿರುವ ಕೆಲಸಕ್ಕೆ ಟೀಕೆ ಮಾಡಬಾರದು. ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಲಿ ಎಂದು ಅವರು ಸಲಹೆ ನೀಡಿದರು.
ಚುನಾವಣೆ ಫಲಿತಾಂಶದ ನಂತರವೂ ಹಾಲಿ ಶಾಸಕರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದೇನೆ. ನಗರಸಭೆಯನ್ನು ಪಾಲಿಕೆಯಾಗಿಸಲು ಪ್ರಯತ್ನ ಮಾಡಿದ್ದೇನೆ. ಪೌರಕಾರ್ಮಿಕರ ನೇಮಕ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಟೀಕೆ ಮಾಡುವುದು ಬಿಟ್ಟು ಮುಂದಿನ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಿ ಎಂದರು.

Leave a Reply

Your email address will not be published. Required fields are marked *