ಚಿಕ್ಕಬಳ್ಳಾಪುರ – ಮುಳಬಾಗಿಲು ಚತುಷ್ಪಥ ರಸ್ತೆ : ವರ್ಷಾಂತ್ಯಕ್ಕೆ ಟೆಂಡರ್!
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಿವಾಸಿಗಳಿಗೊಂದು ಸಂತಸದ ಸುದ್ದಿ ಇಲ್ಲಿದೆ. ಜಿಲ್ಲಾಕೇಂದ್ರವಾದ ಚಿಕ್ಕಬಳ್ಳಾಪುರದಿಂದ ಕೋಲಾರ ಜಿಲ್ಲೆಯ ಮುಳಬಾಗಿಲಿನವರೆಗೂ ಚತುಷ್ಪಥ ಹೆದ್ದಾರಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ವರ್ಷಾಂತ್ಯದೊಳಗೆ ಟೆಂಡರ್ ಕರೆಯುವ ಸಾಧ್ಯತೆಯಿದೆ.
ರಾಷ್ಟ್ರೀಯ ಹೆದ್ದಾರಿ 234ನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ , ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದ್ದು, ಇದರಿಂದಾಗಿ ಚಿಂತಾಮಣಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಕೋಲಾರದ ಮುಳಬಾಗಿಲವರೆಗೂ ತಲೆಯೆತ್ತುತ್ತಿರುವ ಕೈಗಾರಿಕಾ ಪ್ರದೇಶಗಳಿಗೆ ಅನುಕೂಲವಾಗಲಿದೆ. ಇದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಯೂ ಸಹ ಸಾಧ್ಯವಾಗಲಿದ್ದು, ಮುಂಬರುವ ದಿನಗಳಲ್ಲಿ ಹೆದ್ದಾರಿಯಲ್ಲಿ ಸಂಚಾರದಟ್ಟಣೆಯೂ ಸಹ ದೂರವಾಗಲಿದೆ.
82 ಕಿ.ಮೀ ವ್ಯಾಪ್ತಿಯ ಈ ಹೆದ್ದಾರಿಯು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ಮಾರ್ಗವಾಗಿ, ಚಿಂತಾಮಣಿ, ಶ್ರೀನಿವಾಸಪುರದವರೆಗೂ ಕ್ಷೇತ್ರ ಪರಿಶೀಲನೆ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ವಾಹನದಟ್ಟಣೆ, ಭೂಸ್ವಾಧೀನ ಪ್ರಕ್ರಿಯೆ ಮುಂತಾದವುಗಳ ಬಗ್ಗೆ ಸಮಗ್ರ ಕಾರ್ಯ ಸಾಧ್ಯತಾ ವರದಿ ಸಿದ್ದಪಡಿಸಿ ಬಳಿಕ ಈ ವರ್ಷಾಂತ್ಯದೊಳಗೆ ಟೆಂಡರ್ ಕರೆಯಲಾಗುವುದು ಎಂದು ಎನ್‌ಎಚ್‌ಎ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಗರಿ ರಾಜ್ಯದ ಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಯನ್ನು ಕರೆದು ಈ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಈ ಚತುಷ್ಪಥ ಯೋಜನೆ ಅನುಷ್ಠಾನಗೊಂಡಲ್ಲಿ, ಈ ಭಾಗದ ತರಕಾರಿ ಮತ್ತು ಹಣ್ಣು ಬೆಳೆಗಾರರು, ರೇಷ್ಮೆ ಬೆಳೆಗಾರರು ಸೇರಿದಂತೆ ಎಲ್ಲಾ ಕೃಷಿಕರೂ, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜನಜೀವನ ಸುಧಾರಿಸಲಿದೆ.