ಹಾಸನ ಲೋಕಸಮರದಲ್ಲಿ ರಾಮನ ಏಟಿಗೆ ಜೆಡಿಎಸ್ ಭದ್ರಕೋಟೆ ಛಿದ್ರ?
ದೇಶದ ಅತ್ಯಂತ ಪ್ರತಿಷ್ಠಿತ ಲೋಕಸಭಾ ಕ್ಷೇತ್ರಗಳಲ್ಲಿ ಹಾಸನವೂ ಒಂದು. ದೇಶಕ್ಕೆ ಪ್ರಧಾನಿಯನ್ನು ಕೊಡುಗೆಯಾಗಿ ನೀಡಿದ ಖ್ಯಾತಿ ಜೊತೆಗೆ ಅದೇ ಪ್ರಧಾನಿಯನ್ನು ಸೋಲಿಸಿದ ಕುಖ್ಯಾತಿಗೂ ಪಾತ್ರವಾದ ಕ್ಷೇತ್ರ. ಹಾಗಾಗಿ ಹಾಸನ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲಿ ರಾಷ್ಟ್ರಮಟ್ಟದಲ್ಲೂ ವಿಶಿಷ್ಟ ಸ್ಥಾನ ಪಡೆದಿದೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ನಿರ್ಣಾಯಕ ಮತದಾರರಾಗಿದ್ದಾರೆ. ಹಾಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಇಲ್ಲಿ ಆಧಿಪತ್ಯ ಹೊಂದಿದ್ದು, ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿದೆ. ಎಚ್.ಡಿ.ದೇವೇಗೌಡರು 5 ಬಾರಿ ಇಲ್ಲಿಂದ ಗೆದ್ದು ಬಂದಿದ್ದರೂ ಒಂದು ಬಾರಿ ಸೋಲಿನ ರುಚಿ ಅನುಭವಿಸಿದ್ದಾರೆ. ಅದರಲ್ಲೂ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ಇಲ್ಲಿಯ ಮತದಾರರು ಸೋಲಿಸಿರುವುದು ಇಲ್ಲಿನ ಮತದಾರರ ಮನಸ್ಥಿತಿಗೆ ಹಿಡಿದ ಕನ್ನಡಿ.
ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿದ್ದ ಹಾಸನದಲ್ಲಿ ಇದೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ದಿನದಿಂದ ದಿನಕ್ಕೆ ಬಿಜೆಪಿ ತನ್ನ ಬಲ ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಜೆಡಿಎಸ್ 4 ರಲ್ಲಿ ಜಯ ಸಾಧಿಸಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 2 ಸ್ಥಾನಗಳನ್ನು ಗೆದ್ದಿರುವುದು.
ಅತ್ಯಂತ ಪ್ರತಿಷ್ಠಿತ ಕಣವಾಗಿದ್ದ ಹಾಸನ ಕ್ಷೇತ್ರದಲ್ಲಿ ಇಡೀ ದೇವೇಗೌಡರ ಕುಟುಂಬವೇ ಒಂದಾಗಿ ಅಖಾಡಕ್ಕೆ ಇಳಿದಿದ್ದರಿಂದ ಹಾಲಿ ಶಾಸಕರಾಗಿದ್ದ ಬಿಜೆಪಿಯ ಪ್ರೀತಂ ಗೌಡ ಸೋಲುಂಡರೂ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದಿರುವುದು ವಿಶೇಷ.
ಬೇಲೂರು ಮತ್ತು ಸಕಲೇಶಪುರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಇದೇ ಮೊದಲ ಬಾರಿಗೆ ಈ ಕ್ಷೇತ್ರಗಳಲ್ಲಿ ಬಿಜೆಪಿಯ ಖಾತೆ ತೆರೆದಿದ್ದಾರೆ. ಕಾಂಗ್ರೆಸ್ ಕೂಡ ಕಡೂರು ಮತ್ತು ಅರಸೀಕೆರೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರಿಂದ ಮೂರೂ ಪಕ್ಷಗಳ ನಡುವೆ ಪೈಪೋಟಿ ಆರಂಭವಾಗಿದೆ.
ಒಂದು ಕಡೆ ಕಾಂಗ್ರೆಸ್ ಮರಳಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ತಂತ್ರ ರೂಪಿಸುತ್ತಿದ್ದರೆ ಮತ್ತೊಂದೆಡೆ ದಿನದಿಂದ ದಿನಕ್ಕೆ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವ ಬಿಜೆಪಿ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಖಾತೆ ತೆರೆಯುವ ಉಮೇದಿನಲ್ಲಿದೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ 16.5 ಲಕ್ಷ ಮತದಾರರಿದ್ದಾರೆ. ಕಳೆದ ಬಾರಿ ಎಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಎ.ಮಂಜು ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಆದರೆ ಕಳೆದ ಬಾರಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದಿದ್ದರಿಂದ ಜೆಡಿಎಸ್ ಹಾದಿ ಸುಗಮವಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಕೂಡ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಉದ್ದೇಶಿಸಿದ್ದರಿಂದ ಜೆಡಿಎಸ್ ಬಲ ಕುಗ್ಗಲಿದ್ದು, ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ.
ನಾಲ್ಕು ಬಾರಿ ಜೆಡಿಎಸ್ ನಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿದ್ದ ಎಟಿ ರಾಮಸ್ವಾಮಿ ಇದೀಗ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಬಯಸಿದ್ದಾರೆ. ಬೆಂಗಳೂರಿನ ಭೂಹಗರಣವನ್ನು ಬಯಲಿಗೆಳೆದ ಎಟಿ ರಾಮಸ್ವಾಮಿ ವರದಿ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಎಟಿ ರಾಮಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅತ್ಯಂತ ಸಜ್ಜನ, ಸರಳ, ಮಿಸ್ಟರ್ ಕ್ಲೀನ್ ಎಂದೆಲ್ಲಾ ಖ್ಯಾತಿಗೆ ಪಾತ್ರರಾಗಿರುವ ಎಟಿ ರಾಮಸ್ವಾಮಿ ಬಗ್ಗೆ ಹಾಸನ ಜಿಲ್ಲೆಯಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಲ್ಲದೇ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಎಟಿ ರಾಮಸ್ವಾಮಿ ಬಗ್ಗೆ ಅನುಕಂಪವೂ ಇದೆ.
ಒಂದು ಕಡೆ ಬಿಜೆಪಿ ಅಲೆ, ಮತ್ತೊಂದು ಕಡೆ ಮೋದಿ ಅಲೆ, ಅಲ್ಲದೇ ರಾಮಸ್ವಾಮಿ ಪರವಾದ ಅನುಕಂಪದ ಅಲೆ ಕಂಡು ಬರುತ್ತಿದ್ದು, ಜೆಡಿಎಸ್ ಪಾಳಯದಲ್ಲಿ ನಡುಕ ಶುರುವಾಗಿದೆ. ಕಾಂಗ್ರೆಸ್ ಕೂಡ ತನ್ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿ ಗೆಲುವಿನ ಹಾದಿ ಸುಗಮ ಎಂದೇ ವಿಶ್ಲೇಷಿಸಲಾಗುತ್ತಿದೆ.